*ಗೋಣಿಕೊಪ್ಪ, ಏ. ೧೫: ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಮಲ್ಲೂರು ಗ್ರಾಮಸ್ಥರು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು. ರಾಜಕಾರಣಿಗಳಿಗೆ ಟೀಕೆಗಳು ಸಹಜವಾದುದ್ದೆ. ಆದರೆ ವಿನಾಕಾರಣ ವೈಯಕ್ತಿಕ ಟೀಕೆಗಳು ಸರಿಯಲ್ಲ ಎಂದು ಸನ್ಮಾನ ಸ್ವೀಕರಿಸಿದ ಬೋಪಯ್ಯ ಅವರು ಹೇಳಿದರು. ಮಾಡಿರುವ ಕಾರ್ಯವನ್ನು ವಿಶಾಲ ಮನಸ್ಥಿತಿಯಿಂದ ಒಪ್ಪಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು.
ವಿನಾಕಾರಣ ಸುಮ್ಮನೆ ಆರೋಪ ಹೊರಿಸುವ ಉದ್ದೇಶ ಗೌರವಿತವಾದದ್ದಲ್ಲ ಎಂದು ಹೇಳಿದರು. ಕಳೆದ ೨೦ ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಮತದಾರರು ನೀಡಿದ ಆಶೀರ್ವಾದದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸರ್ಕಾರದ ನಯಾ ಪೈಸವು ವ್ಯರ್ಥವಾಗದಂತೆ ಕ್ಷೇತ್ರಕ್ಕೆ ಬಳಸಿಕೊಳ್ಳಲಾಗಿದೆ. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಬದಲಾವಣೆಗೆ ಹುಸಿ ಆರೋಪಗಳನ್ನ ಅಲಂಕರಿಸುತ್ತಿರುವುದು ವೇದನೆಯ ವಿಚಾರ ಎಂದರು.
ಕೊರೊನಾ ಕಾಲದಲ್ಲಿ ಕ್ಷೇತ್ರದ ಜನರ ಆರೋಗ್ಯದ ಕಾಳಜಿಯನ್ನಿಟ್ಟು ಕಾರ್ಯನಿರ್ವಹಿಸಿದ್ದೇನೆ. ಕಾವೇರಿ ನೀರಾವರಿ ಮಂಡಳಿಯ ಅನುದಾನವನ್ನು ಕ್ಷೇತ್ರಕ್ಕೆ ಬಳಕೆ ಮಾಡಿಕೊಂಡ ಹೆಮ್ಮೆಯಿದೆ ಎಂದರು. ಗ್ರಾಮಾಭಿವೃದ್ಧಿ ಸಮಿತಿ ಪ್ರಧಾನ ಸಂಚಾಲಕ ಚಕ್ಕೆರ ಸೂರ್ಯ ಅಯ್ಯಪ್ಪ, ಎಂ.ಎಲ್.ಸಿ. ಸುಜಾ ಕುಶಾಲಪ್ಪ ಇವರುಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಪಿ.ಎ. ಅಮ್ಮುಣಿ, ಉಪಾಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಸದಸ್ಯರುಗಳಾದ ಪಡಿಜ್ಞಾರಂಡ ಕವಿತಾ, ಅಳಮೇಂಗಡ ಪವಿತಾ ರಮೇಶ್, ಬಾಳೆಲೆ ಸೆಂಟರ್ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಕೊಕ್ಕೇಂಗಡ ಸ್ಮಿತಾ, ಒಲಂಪಿಯನ್ ಕರ್ನಲ್ ಬಾಳೆಯಡ ಸುಬ್ರಮಣಿ, ಉಪನ್ಯಾಸಕಿ ನಳಿನಾಕ್ಷಿ ಮತ್ತು ನಿಟ್ಟೂರು, ಬಾಳೆಲೆ, ಮಲ್ಲೂರು ಗ್ರಾಮಸ್ಥರು ಇದ್ದರು.