ಸೋಮವಾರಪೇಟೆ, ಏ. ೧೬: ಹಾನಗಲ್ಲು ಹಾಗೂ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಕ್ಕೆಹೊಳೆಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸುವಂತೆ ಶಾಸಕ ಡಾ. ಮಂತರ್ ಗೌಡ ಸಂಬAಧಿಸಿದ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಿದರು.
ಪಟ್ಟಣ ಸಮೀಪದ ಆಲೇಕಟ್ಟೆ ರಸ್ತೆಯಲ್ಲಿ ಹರಿಯುತ್ತಿರುವ ಕಕ್ಕೆಹೊಳೆಯ ನೀರು ಮಳೆಗಾಲದಲ್ಲಿ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟು ಮಾಡುತ್ತಿರುವುದರಿಂದ, ಹೊಳೆಯ ಎರಡೂ ಬದಿ ತಡೆಗೋಡೆ ನಿರ್ಮಾಣ ಮಾಡುವಂತೆ ಗ್ರಾಮದ ಏಕದಂತ ಸೇವಾ ಸಮಿತಿಯ ಪದಾಧಿಕಾರಿಗಳು ಶಾಸಕರಿಗೆ ಮನವಿ ಸಲ್ಲಿಸಿದರು.
ಸೈನಿಕ ರಸ್ತೆ ಹಾಗೂ ಕಾವೇರಿ ಬಡಾವಣೆಯ ಬಿ.ಡಿ. ರಮೇಶ್, ಎಸ್.ಬಿ. ರಮೇಶ್, ಎಸ್.ಎಂ. ಸುಬ್ರಹ್ಮಣ್ಯ, ಡಿ.ಜೆ. ಅಶೋಕ್‌ಕುಮಾರ್, ಡಿ.ಎನ್. ಮದನ್ ಕುಮಾರ್, ಎನ್.ಎಸ್. ಕೃಷ್ಣ ಸೇರಿದಂತೆ ಇತರರ ಮನೆಗಳಿಗೆ ಪ್ರತಿ ಮಳೆಗಾಲದಲ್ಲೂ ಹೊಳೆಯ ನೀರು ನುಗ್ಗಿ ಹಾನಿ ಸಂಭವಿಸುತ್ತಿದೆ ಎಂದು ಶಾಸಕರ ಗಮನ ಸೆಳೆದರು.
ಕಕ್ಕೆಹೊಳೆಯು ಹರಿಯುವ ಪ್ರದೇಶದ ಅಕ್ಕಪಕ್ಕ ವಾಸದ ಮನೆಗಳು ಇರುವ ಸ್ಥಳದಲ್ಲಿ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಂಬAಧಿಸಿದAತೆ ತಕ್ಷಣ ಕ್ರಿಯಾಯೋಜನೆ ತಯಾರಿಸಬೇಕು. ಸಣ್ಣ ನೀರಾವರಿ ಇಲಾಖಾ ಸಚಿವರೊಂದಿಗೆ ವ್ಯವಹರಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಅಭಿಯಂತರ ಕುಮಾರಸ್ವಾಮಿ ಅವರಿಗೆ ಶಾಸಕರು ಸೂಚಿಸಿದರು. ಈ ಸಂದರ್ಭ ಏಕದಂತ ಸೇವಾ ಸಮಿತಿ ಅಧ್ಯಕ್ಷ ಮುಕುಂದ, ಸ್ಥಳೀಯರಾದ ಸುಕುಮಾರ್, ಸುಬ್ರಮಣಿ, ಕಾರ್ಯಪ್ಪ, ಪ್ರಮುಖರಾದ ಕೆ.ಎಂ. ಲೋಕೇಶ್, ಗ್ರಾ.ಪಂ. ಸದಸ್ಯ ಚೇತನ್ ಸೇರಿದಂತೆ ಇತರರು ಇದ್ದರು.