ಸೋಮವಾರಪೇಟೆ, ಏ. ೧೬: ಪುರಾತನ ಕಾಲದಿಂದಲೂ ಪೂರ್ವಿಕರು ನಡೆಸಿಕೊಂಡು ಬಂದಿರುವ ಕೂತಿನಾಡಿಗೆ ಒಳಪಟ್ಟ ನಗರಳ್ಳಿ ಶ್ರೀ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಈಗಾಗಲೇ ಆರಂಭಗೊAಡಿದ್ದು, ತಾ. ೨೧ರಂದು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ಸಬ್ಬಮ್ಮ ದೇವರಿಗೆ ವಿಶೇಷ ಪೂಜೆ, ಹಗಲು ಸುಗ್ಗಿ ನಡೆಯಲಿದೆ ಎಂದು ನಗರಳ್ಳಿ ಗ್ರಾಮದ ಕೂತಿನಾಡು ಶ್ರೀ ಸಬ್ಬಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಬಿ. ಜಗದೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಗಾದಿ ಹಬ್ಬ ಕಳೆದ ಮಾರನೇ ದಿನದಿಂದಲೇ ಕೂತಿನಾಡು ವ್ಯಾಪ್ತಿಗೆ ಒಳಪಡುವ ೧೮ ಗ್ರಾಮಗಳಲ್ಲಿ ಸುಗ್ಗಿ ಸಂಬAಧಿತ ಆಚರಣೆಗಳು ಚಾಲ್ತಿಗೆ ಬಂದಿವೆ. ಬೀರೇದೇವರಿಗೆ ಗೊನೆ ಕಡಿಯುವುದು, ಸಬ್ಬಮ್ಮ ದೇವಿಯನ್ನು ಹಸೆಮಣೆ ಏರಿಸುವುದು, ಮಡೆಪೂಜೆಗಳು ನೆರವೇರಿದ್ದು, ತಾ. ೧೭ರಂದು (ಇಂದು) ಹಾಸನ-ಕೊಡಗು ಗಡಿಯಲ್ಲಿರುವ ನೀತಿಬೆಟ್ಟಕ್ಕೆ ತೆರಳಿ ದೇವರನ್ನು ಕರೆತರುವ ಸಂಪ್ರದಾಯ ನಡೆಯಲಿದೆ ಎಂದರು.
ತಾ. ೧೮ರಂದು (ನಾಳೆ) ದೊಡ್ಡಹಬ್ಬದ ಸಾರು, ತಾ. ೧೯ರಂದು ದೊಡ್ಡಹಬ್ಬ, ಮಲ್ಲು ಸುಗ್ಗಿ, ಬಿಲ್ಲೇರಂಗದಲ್ಲಿ ಮಲ್ಲು ಬೆಳಗುವುದು, ಸೊಡ್ಲು ಪೂಜೆಯೊಂದಿಗೆ ಸುಗ್ಗಿ ಹಾಡುವ ಪದ್ದತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ತಾ. ೨೦ರಂದು ದೊಡ್ಡಮೀಸಲು ಪೂಜೆ, ೨೧ರಂದು ಹಗಲು ಸುಗ್ಗಿ ನಡೆಯಲಿದೆ. ದೇವರಿಗೆ ಕಾಣಿಕೆ ಪೂಜೆಯ ನಂತರ ಸುಗ್ಗಿ ರಂಗಕ್ಕೆ ಆಗಮಿಸಿ ಹೊರಬೆಂಗಳು ಸಾರು ನಡೆಯಲಿದೆ. ನಂತರ ಕಂಬತಳೆಗೆ ಆಗಮಿಸಿ ನಾಡ್ನಳ್ಳಿ, ಕೊತ್ನಳ್ಳಿ, ಕುಂದಳ್ಳಿ, ತಡ್ಡಿಕೊಪ್ಪ ಗ್ರಾಮಗಳಿಂದ ತಂದ ಬೆತ್ತದಿಂದ ಹಗ್ಗವನ್ನು ಮಾಡಿ ಊಲುಮಣೆಗೆ ಏರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದರು.
ನAತರ ರಾಜರಕಾಲದ ಕತ್ತಿಗೆಗಳಿಗೆ ವಿಶೇಷ ಪೂಜೆ, ಸಂಪ್ರದಾಯದAತೆ ವೀಳ್ಯದೆಲೆ ಸತ್ಕಾರ, ಕಂಬತಳೆ ರಂಗದಲ್ಲಿ ಮೀಸಲುಗಾರರಿಗೆ ಸನ್ಮಾನ, ಊಲುಮಣೆ ಮೇಲೆ ಅರ್ಚಕರನ್ನು ಕೂರಿಸಿ ತೂಗುವುದು, ದೇವರ ಪ್ರದಕ್ಷಿಣೆ, ಈಡುಗಾಯಿ, ಬಾಳೆಹಣ್ಣು ಸೇವೆ, ಬಿಲ್ಲೆ ರಂಗದಲ್ಲಿ ಪಟ್ಟ ಒಪ್ಪಿಸುವುದು, ಮದುವೆ ಕಾಣಿಕೆ ಅರ್ಪಣೆ, ಮಡಿಲು ತುಂಬಿಸುವುದು, ಬಿಲ್ಲು ಕುಣಿತ, ಮಾರುಗೋಲು ತೂಗುವುದು, ಕೊಳವೆ ಒಪ್ಪಿಸುವುದು, ದೇವರ ಕಲ್ಲಿಗೆ ಅರಶಣ ಅಕ್ಕಿ ಹಾಕುವ ಸಂಪ್ರದಾಯಿಕ ಪೂಜೆ ನಡೆಯಲಿದೆ. ನಂತರ ಸಾರ್ವಜನಿಕರಿಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದರು. ತಾ. ೨೨ರಂದು ಊಲು ಇಳಿಸುವುದು, ದೇವರ ಅರ್ಚಕರು ಸಲಿಗೆ ಒಪ್ಪಿಸುವುದು, ತಾ. ೨೬ರಂದು ಹೊಸಳಹಬ್ಬದ ಸಾರು, ೨೭ರಂದು ನಾಡತಿ ಬನದಲ್ಲಿ ಮಡೆ ಮಾಡುವ ಶಾಸ್ತçಗಳು ನಡೆಯುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿಗೆ ತೆರೆಬೀಳಲಿದೆ ಎಂದರು.
ಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಜಿ.ಆರ್. ಸುರೇಶ್, ಕಾರ್ಯದರ್ಶಿ ಕೆ.ಯು. ಜಗದೀಶ್, ಸಿ.ಎಸ್. ಬೋಪಯ್ಯ, ಬಿ.ಬಿ. ಪ್ರದೀಪ್‌ಕುಮಾರ್ ಅವರುಗಳು ಉಪಸ್ಥಿತರಿದ್ದರು.