ವೀರಾಜಪೇಟೆ, ಏ. ೧೬: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ, ವೀರಾಜಪೇಟೆ ತಾಲೂಕು ಹೆಗ್ಗಳ ಹಾಗೂ ಬೇಟೋಳಿ ಗ್ರಾಮಗಳ ಹಲವು ಭಾಗಗಳಲ್ಲಿ, ಮಳೆಗಾಲದಲ್ಲಿ ಕೃಷಿ ಭೂಮಿ ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ತಮ್ಮ ವಿಶೇಷ ಅನುದಾನದಲ್ಲಿ ಕೃಷಿ ಜಮೀನುಗಳಿಗೆ ಹಾನಿಯಾಗದಂತೆ ತಡೆಗೋಡೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿದರು.
ರಾಜ್ಯ ಸರಕಾರದ ಸಣ್ಣ ನೀರಾವರಿ ಇಲಾಖೆ ವತಿಯಿಂದ ಈ ಅನುದಾನವನ್ನು ಮಂಜೂರು ಮಾಡಿಸಿದ ಶಾಸಕರು ಹಲವು ಭಾಗದಲ್ಲಿ ಕೃಷಿ ಭೂಮಿಗೆ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಎಂ.ಎಸ್ ಲೆನಿಯನ್ ಅವರ ಕೃಷಿ ಜಮೀನಿನ ಬಳಿ, ಮಾಳೇಟಿರ ಕುಟುಂಬಸ್ಥರ ಕೃಷಿ ಜಮೀನಿನ ಬಳಿ, ಅರೆಯಡ ಮತ್ತು ಅಮ್ಮಣ್ಣಕುಟ್ಟಂಡ ಕುಟುಂಬಸ್ಥರ ಕೃಷಿ ಜಮೀನಿನ ಬಳಿ ಎಲ್ಲಾ ಕಾಮಗಾರಿಗಳನ್ನು ಶಾಸಕರ ವಿಶೇಷ ಕಾಳಜಿಯಿಂದ, ರಾಜ್ಯ ಸರಕಾರದ ಸಣ್ಣ ನೀರಾವರಿ ಇಲಾಖೆಯ ಮುಖಾಂತರ ಮಂಜೂರು ಮಾಡಿಸಿದ್ದಾರೆ.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳುವಂತೆ ಸಂದೇಶ ನೀಡಿ, ಗುತ್ತಿಗೆದಾರರು ಅತಿ ಶೀಘ್ರದಲ್ಲಿ ಮಳೆಗಾಲ ಪ್ರಾರಂಭವಾಗುವ ಮೊದಲೇ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ವರದಿ ನೀಡಬೇಕೆಂದು ಇದೇ ಸಂದರ್ಭದಲ್ಲಿ ಆದೇಶ ಮಾಡಿದರು.
ಈ ಸಂದರ್ಭದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ವಲಯ ಅಧ್ಯಕ್ಷರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಡಳಿತ ಮಂಡಳಿ ಅಧ್ಯಕ್ಷ ಪದಾಧಿಕಾರಿಗಳು ಸೇರಿದಂತೆ ಪಕ್ಷದ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.