ಮಡಿಕೇರಿ, ಏ. ೧೬: ನಗರದ ಅಶೋಕಪುರದ ಅನ್ನಪೂರ್ಣೇಶ್ವರಿ ಸಮುದಾಯ ಭವನ ಸಮಿತಿ, ಗಣಪತಿ ಉತ್ಸವ ಸಮಿತಿ ಹಾಗೂ ಅಂಬೇಡ್ಕರ್ ಭವನ ಸಮಿತಿಯ ಜಂಟಿ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಮೆರವಣಿಗೆ ನಡೆಯಿತು.
ನಗರದ ಮಂಗೇರಿರ ಮುತ್ತಣ್ಣ ವೃತ್ತದಿಂದ ಅಂಬೇಡ್ಕರ್ ಭವನದತನಕ ಅಲಂಕೃತ ರಥದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಯಿತು. ಪ್ರಮುಖರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಾಸಿಕ್ ಬ್ಯಾಂಡ್ ಮೆರವಣಿಗೆಯ ಆಕರ್ಷಣೆಯಾಗಿತ್ತು.
ಅನ್ನಪೂರ್ಣೇಶ್ವರಿ ಸಮುದಾಯ ಭವನ ಸಮಿತಿ ಅಧ್ಯಕ್ಷ ಹೆಚ್.ಎಂ. ಜಯರಾಮ್, ಉಪಾಧ್ಯಕ್ಷ ಧರ್ಮೇಂದ್ರ, ಕಾರ್ಯದರ್ಶಿ ಜಯಪ್ರಕಾಶ್, ಅಂಬೇಡ್ಕರ್ ಭವನ ಸಮಿತಿ ಉಪಾಧ್ಯಕ್ಷ ಹೆಚ್.ಆರ್. ಮುತ್ತಪ್ಪ, ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಎಂ.ಜಿ. ಸುನಿಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪೊನ್ನಂಪೇಟೆ, ಏ. ೧೬: ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಆಚರಿಸಲಾಯಿತು.
ಈ ಸಂದರ್ಭ ತಹಶೀಲ್ದಾರ್ ಮೋಹನ್ ಕುಮಾರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಭಾರತಕ್ಕೆ ವಿಶ್ವ ಶ್ರೇಷ್ಠ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರು ಸಮಾನತೆಗಾಗಿ ಹೋರಾಡಿದ ಮಹಾನ್ ಮಾನವತಾವಾದಿ. ಅಂಬೇಡ್ಕರ್ ಅವರ ಆದರ್ಶ ಮತ್ತು ತತ್ವಗಳು ಸಾರ್ವಕಾಲಿಕವಾಗಿದ್ದು, ಪ್ರತಿಯೊಬ್ಬರು ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದರು. ಈ ಸಂದರ್ಭ ಉಪ ತಹಶೀಲ್ದಾರ್ ಸ್ವಾತಿ, ಕಂದಾಯ ನಿರೀಕ್ಷಕರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಗ್ರಾಮಲೆಕ್ಕಿಗರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.