ಸಿದ್ದಾಪುರ, ಏ. ೧೬: ನೆಲ್ಲಿ ಹುದಿಕೇರಿ ಗ್ರಾಮದ ೪ನೇ ವಾರ್ಡಿನ ಲಕ್ಕಿ ಇಲೆವೆನ್ ಪ್ರೀಮಿಯರ್ ಲೀಗ್ ಕ್ರೀಡಾಕೂಟವು ಸಡಗರ ಸಂಭ್ರಮ ದಿಂದ ನಡೆಯಿತು. ೩ ದಿನಗಳ ಕಾಲ ನೆಲ್ಲಿಹುದಿಕೇರಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ನಡೆದ ಕ್ರೀಡಾ ಕೂಟ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿತ್ತು.
ಗ್ರಾಮದ ಕ್ರೀಡಾಪಟುಗಳು, ಮಹಿಳೆಯರು ಸೇರಿದಂತೆ ಮಕ್ಕಳು, ಕ್ರೀಡಾಭಿಮಾನಿಗಳು ಸೇರಿದ್ದರು. ಇದೇ ಮೊದಲ ಬಾರಿಗೆ ನಾಲ್ಕನೇ ವಾರ್ಡಿನ ಗ್ರಾಮಸ್ಥರು ಹಾಗೂ ಯುವಕರು ಸೇರಿ ಕ್ರೀಡಾಕೂಟವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ಮೊದಲ ದಿನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಎಸ್.ಎನ್.ಡಿ.ಪಿ. ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಕ್ರೀಡೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆ ಕ್ರೀಡೆಯ ತವರೂರು ಆಗಿದ್ದು ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಪಂದ್ಯಾವಳಿಯನ್ನು ಆಯೋಜಿಸಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಇರುವ ಕ್ರೀಡಾಪಟುಗಳ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು. ಕೊನೆಯ ಫೈನಲ್ ರೋಮಾಂಚಕಾರಿ ಪಂದ್ಯಾವಳಿಯಲ್ಲಿ ನಿಖಿಲ್ ದಾಸ್ ನೇತೃತ್ವದ ರಾಯಲ್ ಬ್ರದರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ರನ್ನರ್ಸ್ ಡ್ರೀಮ್ ೪೬ ತಂಡವು ಪಡೆದುಕೊಂಡಿತು. ಪಂದ್ಯಾವಳಿಯ ಸರಣಿ ಶ್ರೇಷ್ಠನಾಗಿ ನಿಧಿಲ್ ಅನಿಯನ್, ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮನಾಗಿ ಜ್ಹೀಯದ್, ಉತ್ತಮ ಬೌಲರಾಗಿ ಅಜ್ಮಲ್, ಉತ್ತಮ ಕ್ಷೇತ್ರ ರಕ್ಷಣೆಗಾರ ನಯಾಜ್, ಉತ್ತಮ ಬ್ಯಾಟ್ಸ್ಮೆನ್ ಆಗಿ ನಿಖಿಲ್, ಉತ್ತಮ ಗೂಟ ರಕ್ಷಕನಾಗಿ ಜಾಫರ್, ಭವಿಷ್ಯದ ಆಟಗಾರನಾಗಿ ರಫೀಕ್, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರೀಡಾಪಟು ನಿಖಿಲ್ ದಾಸ್, ಉತ್ತಮ ಹಿಡಿತಗಾರನಾಗಿ ಸಲಹುದ್ದೀನ್ ಮುಸ್ತಫ ಪಡೆದು ಕೊಂಡರೆ ಉತ್ತಮ ತಂಡವಾಗಿ ಸಿಸಿ ಕ್ರಿಕೆಟರ್ಸ್ ತಂಡ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷಿö್ಮ, ಉಪಾಧ್ಯಕ್ಷೆ ಪ್ರಮೀಳಾ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಪ್ಸಲ್, ಸಿಂಧು, ಕೊಯ ಹಾಗೂ ಡಿ.ಸಿ.ಸಿ. ಸದಸ್ಯ ಬಶೀರ್ ಕೆ.ಎಂ. ಯುವ ಕಾಂಗ್ರೆಸ್ ಕಾರ್ಯದರ್ಶಿ ಷಂಶುದ್ದೀನ್ ಹಾಗೂ ಕ್ರೀಡಾ ಸಂಘಟನೆಯ ಪದಾಧಿಕಾರಿಗಳಾದ ಉದಯ್ ಕುಮಾರ್, ಆಸಿಫ್, ಷಂಶುದ್ದೀನ್, ಶೌಕತ್ ಅಭಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು, ದಾನಿಗಳು ಇನ್ನಿತರರು ಹಾಜರಿದ್ದರು. ಎಂ.ಎ. ಅಜೀಜ್ ಕಾರ್ಯಕ್ರಮ ನಿರೂಪಿಸಿ, ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡಿದರು.
ಇದೇ ಸಂದರ್ಭ ಪೊನ್ನಂಪೇಟೆ ಹಾಗೂ ಮಾಲ್ದಾರೆ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಮಾಲ್ದಾರೆಯ ಮಹಿಳಾ ತಂಡ ಜಯಗಳಿಸಿತು. ಪುರುಷರ ಪಂದ್ಯಾವಳಿಯಲ್ಲಿ ವಿಜೇತರಾದ ಎರಡು ತಂಡಗಳಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ನೀಡಲಾಯಿತು. ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ಭಾಗವಹಿಸಿದ ಗ್ರಾಮಸ್ಥರಿಗೆ ಕ್ರೀಡಾ ಸಮಿತಿಯ ವತಿಯಿಂದ ಭೋಜನ ಏರ್ಪಡಿಸಲಾಗಿತ್ತು.