ಮಡಿಕೇರಿ, ಏ. ೧೭: ಮಡಿಕೇರಿ ತಾಲೂಕು ಕಚೇರಿಯಲ್ಲಿ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದ್ದು, ಅಧಿಕಾರಿಗಳು ಆಯಾ ಕಡತಗಳಿಗೆ ಯಾವ ಯಾವ ದಾಖಲೆಗಳನ್ನು ತರಬೇಕು ಎನ್ನುವುದರ ಕುರಿತು ಸಾರ್ವಜನಿಕವಾಗಿ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಅವರು, ಮಾಹಿತಿಯ ಕೊರತೆಯಿಂದಾಗಿ ಮಡಿಕೇರಿ ತಾಲೂಕು ಕಚೇರಿಗೆ ಸಾರ್ವಜನಿಕರು ನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸಾರ್ವಜನಿಕರ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವುದಕ್ಕೆ ಪ್ರಮುಖ ಕಾರಣ ವಿವಿಧ ಕಡತಗಳ ಅರ್ಜಿಗಳಿಗೆ ಬೇಕಾಗಿರುವ ದಾಖಲೆಗಳ ಮಾಹಿತಿಯ ಕೊರತೆ. ಅಲ್ಲದೆ ಲಂಚಕ್ಕಾಗಿ ಕಡತ ವಿಲೇವಾರಿ ವಿಳಂಬವಾಗುತ್ತಿದೆ ಎನ್ನುವ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ನೂತನ ತಾಲೂಕು ಕಚೇರಿ ಕಟ್ಟಡದಲ್ಲಿ ಯಾವ ಅರ್ಜಿಗೆ ಯಾವ ದಾಖಲೆಗಳನ್ನು ತರಬೇಕು ಮತ್ತು ಯಾವ ಅರ್ಜಿ ಎಷ್ಟು ದಿನಗಳಲ್ಲಿ ವಿಲೇವಾರಿಯಾಗುತ್ತದೆ ಎನ್ನುವ ಬಗ್ಗೆ ಬಹಿರಂಗವಾಗಿ ಫಲಕಗಳನ್ನು ಅಳವಡಿಸಬೇಕು. ಈ ಕ್ರಮದಿಂದ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಮುಕ್ಕಾಟಿರ ಅಪ್ಪಯ್ಯ ತಿಳಿಸಿದರು.
ಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ. ಪೃಥ್ವಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಎಂ. ಬೆಳ್ಯಪ್ಪ, ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ಅಧ್ಯಕ್ಷ ಹೆಚ್.ಎ. ರಮೇಶ್ ಉಪಸ್ಥಿತರಿದ್ದರು.