ಸೋಮವಾರಪೇಟೆ, ಏ. ೨೨: ಇಲ್ಲಿನ ಕಾಂಚನ ಗಂಗಾ ಕ್ರೀಡಾ ಸಂಸ್ಥೆ ಬಳಗುಂದ, ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ವತಿಯಿಂದ ಕಳೆದ ೨೦ ದಿನಗಳಿಂದ ಪದವಿ ಪೂರ್ವ ಕಾಲೇಜಿನ ಸಿಂಥೆಟಿಕ್ ಟರ್ಫ್ ಹಾಕಿ ಮೈದಾನದಲ್ಲಿ ನಡೆದ ಬೇಸಿಗೆ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಟರ್ಫ್ ಮೈದಾನದಲ್ಲಿ ಜರುಗಿತು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಕ್ರೀಡಾ ಶಿಬಿರಗಳು ನಡೆಯುತ್ತಿದ್ದು, ಗ್ರಾಮೀಣ ಪ್ರತಿಭೆಗಳು ಇದರ ಲಾಭವನ್ನು ಪಡೆಯಬೇಕು ಎಂದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ನೆರವಾಗುವ ದೃಷ್ಟಿಯಿಂದ ಹಾಕಿ ಶಿಬಿರ ನಡೆಸಲಾಗುತ್ತಿದೆ ಎಂದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಷ್ಟಿçÃಯ ಹಾಕಿ ತರಬೇತುದಾರ ಸಿ.ಬಿ. ಜನಾರ್ಧನ್, ಪೊಲೀಸ್ ಇಲಾಖೆಯ ಕೆ.ಪಿ. ಮನಮೋಹನ್, ಕುವೆಂಪು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಮಿಲ್‌ಡ್ರೆಡ್ ಗೋನ್ಸಾಲ್ವೆಸ್, ಕಾಫಿ ಮಂಡಳಿ ನಿವೃತ್ತ ಅಧಿಕಾರಿ ಟಿ.ಪಿ. ಚಂಗಪ್ಪ, ಕುವೆಂಪು ವಿದ್ಯಾಸಂಸ್ಥೆಯ ನಿರ್ದೇಶಕ ನಂದಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.
ಶಿಬಿರದಲ್ಲಿ ಹಿರಿಯ ತರಬೇತುದಾರರಾದ ಅಂತೋಣಿ ಡಿಸೋಜ, ವೆಂಕಟೇಶ್, ಪ್ರಕಾಶ್, ಸುರೇಶ್ ಸೇರಿದಂತೆ ಹಲವರು ಕ್ರೀಡಾಪಟುಗಳಿಗೆ ತರಬೇತಿ ನೀಡಿದರು.