ಕೂಡಿಗೆ, ಏ. ೨೨: ಜಿಲ್ಲೆಯ ಉತ್ತರ ಕೊಡಗು ಭಾಗದಲ್ಲಿ ಹೆಚ್ಚಾಗಿ ಬೆಳೆಯಲ್ಪಡುವ ಸಿಹಿಗೆಣಸು ಬೆಳೆಗಾರರಿಗೆ ಕಹಿ ತಂದಿದೆ. ಗಣನೀಯ ಪ್ರಮಾಣ ದರ ಕುಸಿತದಿಂದ ಬೆಳೆಗಾರರು ಆತಂಕಕ್ಕೆ ದೂಡಿದೆ.
ಉತ್ತಮ ಮಳೆ, ಹದ ವಾತಾವರಣದ ಹಿನ್ನೆಲೆ ಉತ್ತಮ ಆದಾಯದ ನಿರೀಕ್ಷೆಯಿಂದ ಡಿಸೆಂಬರ್, ಜನವರಿ ತಿಂಗಳಿನಲ್ಲಿ ಸಿಹಿಗೆಣಸು ಬೆಳೆಯನ್ನು ರೈತರು ಬಿತ್ತನೆ ಮಾಡಿದ್ದರು. ಆದರೆ, ಬೆಳೆ ಕಟಾವಿಗೆ ಬರುವ ಘಟ್ಟದಲ್ಲಿ ದರ ಪಾತಾಳಕ್ಕಿಳಿದು ಮಾಡಿದ ಖರ್ಚು ಕೂಡ ವಾಪಾಸ್ ಬರುವಂತಿಲ್ಲ ಎಂಬ ಸ್ಥಿತಿ ದರ ಇಳಿಕೆಯಿಂದ ಸೃಷ್ಟಿಯಾಗಿದೆ.
ಕಳೆದ ನಾಲ್ಕು ತಿಂಗಳಿನಿAದ ಒಂದು ಕೆಜಿ ಗೆಣಸಿಗೆ ರೂ. ೪೦ ಬೆಲೆ ಇತ್ತು. ಈ ಹಿನ್ನೆಲೆ ಹೆಚ್ಚಿನ ಬೆಳೆಗಾರರು ಸಿಹಿಗೆಣಸು ಬೆಳೆಯತ್ತ ಮುಖ ಮಾಡಿದ್ದರು. ಅನಂತರ ರೂ. ೩೦ಕ್ಕೆ ಇಳಿದಿತ್ತು. ಇದೀಗ ದಿಢೀರ್ ಆಗಿ ಕೆಜಿ ಸಿಹಿಗೆಣಸು ರೂ. ೯ಕ್ಕೆ ತಲುಪಿರುವುದರಿಂದ ಬೆಳೆಗಾರರು ಮುಂದೇನು? ಎಂಬ ಸ್ಥಿತಿಗೆ ಸಿಲುಕಿದ್ದಾರೆ.
ನೀರಾವರಿ ಸೌಲಭ್ಯ ಹೊಂದಿರುವ ರೈತರು ವರ್ಷಕ್ಕೆ ೨ ಬೆಳೆ ತೆಗೆಯುತ್ತಿದ್ದರು. ಸಿಹಿಗೆಣಸಿಗೆ ಉತ್ತಮ ಬೇಡಿಕೆಯೂ ಇತ್ತು.
(ಮೊದಲ ಪುಟದಿಂದ) ಇದಕ್ಕೆ ಪೂರಕವಾಗಿ ಹಣ ವ್ಯಯಿಸಿ ಹಲವು ರೈತರು ಸಿಹಿಗೆಣಸು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಈ ಬಾರಿ ಶುಂಠಿ ದರ ಕುಸಿತ ಕಂಡಿದ್ದು, ಸಿಹಿಗೆಣಸು ಬೆಳೆಗೆ ಉತ್ತಮ ಬೆಲೆ ದೊರೆಯುವ ಆಶಾಭಾವನೆ ರೈತಾಪಿ ವರ್ಗ ಹೊಂದಿತ್ತು. ದರ ಇಳಿಕೆಯ ಪರಿಣಾಮ ವ್ಯಯಿಸಿದ ಹಣವೂ ಬರುವುದಿಲ್ಲ ಎಂಬ ಕೊರಗು ಇದೀಗ ಮೂಡಿದೆ. ಸಹಕಾರ ಸಂಘದಿAದ ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೂರಾರು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ಅರೆ ಮಲೆನಾಡಿನ ೭ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಈ ಸಾಲಿನಲ್ಲಿ ಹೆಚ್ಚು ಸಿಹಿ ಗೆಣಸು ಬೆಳೆಯನ್ನು ಬೆಳೆದಿರುವುದು ಕಾಣಬಹುದಾಗಿದೆ. ಅದರೆ ಈ ಸಾಲಿನಲ್ಲಿ ಬೆಲೆಯು ಬಾರಿ ಕುಸಿತದಿಂದಾಗಿ ರೈತರು ನಷ್ಟಗೊಳಗಾತ್ತಿರುವುದು ಆಘಾತಕ್ಕೆ ಕಾರಣವಾಗಿದೆ. - ಕೆ.ಕೆ. ನಾಗರಾಜಶೆಟ್ಟಿ