ಮಡಿಕೇರಿ, ಏ. ೨೩: ಮಾಲೀಕನ ಮನೆಯಲ್ಲಿಯೇ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಅಸ್ಸಾಂ ಮೂಲದ ಕಾರ್ಮಿಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಸ್ಸಾಂ ರಾಜ್ಯದ ಸೂರಜ್ ಮಿಯಾ (೩೨) ಬಂಧಿತ ಆರೋಪಿಯಾಗಿದ್ದು, ಕಳ್ಳತನವಾಗಿದ್ದ ೧೮ ಗ್ರಾಂ ತೂಕದ ಚಿನ್ನಾಭರಣವನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.
ತಾ. ೧೮ ರಂದು ನಾಪೋಕ್ಲು ನಿವಾಸಿ ಅಮ್ಮಂಡ ಬಿ. ಅಶೋಕ್ ಅವರ ಮಗನ ನಿಶ್ಚಿತಾರ್ಥ ಹಿನ್ನೆಲೆ ಮನೆಯವರು ಗೋಣಿಕೊಪ್ಪಕ್ಕೆ ತೆರಳಿದ್ದ ವೇಳೆ ಮನೆಯ ಹಿಂಬಾಗಿಲು ಮುರಿದು ಬೀರುವಿನಲ್ಲಿದ್ದ ೧೮ ಗ್ರಾಂ ಚಿನ್ನಾಭರಣ ಕಳ್ಳತನವಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು.
ಡಿವೈಎಸ್‌ಪಿ ಸೂರಜ್, ಸಿಪಿಐ ಅನೂಪ್ ಮಾದಪ್ಪ, ನಾಪೋಕ್ಲು ಪಿಎಸ್‌ಐ ಮಂಜುನಾಥ್ ಹಾಗೂ ಅಪರಾಧ ಪತ್ತೆ, ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ತಾ. ೨೦ ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ. ಆರೋಪಿ ಸೂರಜ್ ಅಮ್ಮಂಡ ಅಶೋಕ್ ಅವರ ತೋಟದಲ್ಲಿಯೇ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ. ಅವರದ್ದೆ ಲೈನ್ ಮನೆಯಲ್ಲಿ ನೆಲೆಸಿದ್ದ. ಮನೆಯವರು ಇಲ್ಲದ ಸಮಯದಲ್ಲಿ ಈ ಕೃತ್ಯ ಎಸಗಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.