ಸೋಮವಾರಪೇಟೆ, ಏ. ೨೩: ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದ ಮೇರೆ ಮೂವರು ಆರೋಪಿಗಳಿಗೆ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಬಚ್ಛತೆಯ ಶಿಕ್ಷೆ ವಿಧಿಸಿ ಆದೇಶ ಮಾಡಿದ್ದಾರೆ.
ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದ ಸಮಯದಲ್ಲಿ, ಮೈದಾನದ ಹೊರಭಾಗದಲ್ಲಿ ಆರೋಪಿಗಳು ಹೊಡೆದಾಟದಲ್ಲಿ ತೊಡಗಿದ್ದು, ಈ ಸಂದರ್ಭ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರು ತನಿಖೆ ನಡೆಸಿದ್ದು, ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ದ ಇದ್ದ ಆರೋಪ ಸಾಬೀತಾಗಿರುವುದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ದಿನದ ಮಟ್ಟಿಗೆ ಶುಚಿತ್ವ ಕಾರ್ಯ ನಡೆಸುವಂತೆ ನ್ಯಾಯಾಧೀಶರಾದ ಗೋಪಾಲಕೃಷ್ಣ ಅವರು ತೀರ್ಪು ನೀಡಿದ್ದಾರೆ.
ಅದರಂತೆ ಮೂವರು ಆರೋಪಿಗಳು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯನ್ನು ಸ್ವಚ್ಛಗೊಳಿಸುವ ಮೂಲಕ ಮಾಡಿದ ಅಪರಾಧಕ್ಕೆ ಪ್ರಾಯಶ್ಚಿತ ಮಾಡಿಕೊಂಡಿದ್ದು, ನ್ಯಾಯಾಧೀಶರ ಆದೇಶವನ್ನು ಪಾಲಿಸಿದ್ದಾರೆ.
ಸೋಮವಾರಪೇಟೆ ಪೊಲೀಸ್ ಠಾಣೆಯಿಂದ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ ೩೫೫ ರಡಿಯಲ್ಲಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಅಪರಾಧಕ್ಕೆ ಒಂದು ತಿಂಗಳ ಜೈಲು ಅಥವಾ ರೂ.೧,೦೦೦/- ಹಾಗೂ ಎರಡನ್ನು ವಿಧಿಸಬಹುದಾಗಿರುತ್ತದೆ. ಅದೇರೀತಿ ಭಾರತೀಯ ನ್ಯಾಯ ಸಂಹಿತೆ ಕಲಂ ೩೫೫ರ ಅಪರಾಧಕ್ಕೆ ೨೪ ಗಂಟೆಗಳ ಸಾಮಾನ್ಯ ಕಾರಾಗೃಹ ವಾಸ ಅಥವಾ ರೂ.೧,೦೦೦/-ಗಳ ದಂಡ ಹಾಗೂ ಎರಡನ್ನು ಅಥವಾ ಸಮುದಾಯ ಸೇವೆಯನ್ನು ಮಾಡಲು ಅವಕಾಶವಿರುತ್ತದೆ. ಆರೋಪಿಗಳು ವಿದ್ಯಾವಂತರಾಗಿದ್ದು, ತಿಳಿದು-ತಿಳಿದು ಸಾರ್ವಜನಿಕ ನೆಮ್ಮದಿಗೆ ಮದ್ಯಪಾನ ಮಾಡಿಕೊಂಡು ಜಗಳ ಮಾಡಿಕೊಂಡು ಭಂಗ ಉಂಟು ಮಾಡಿರುವುದು ಕಂಡುಬAದಿರುತ್ತದೆ. ಆದಕಾರಣದಿಂದ ಇವರುಗಳಿಗೆ ಜೈಲು ಅಥವಾ ದಂಡವನ್ನು ವಿಧಿಸುವ ಬದಲಾಗಿ ಸಾರ್ವಜನಿಕ ಸಮುದಾಯ ಸೇವೆಯನ್ನು ಒಂದು ದಿನದ ಮಟ್ಟಿಗೆ ಮಾಡಲು ಆದೇಶ ಮಾಡಿದರೆ ಸೂಕ್ತವೆಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪೊಲೀಸರ ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು, ಸರ್ಕಾರಿ ಆಸ್ಪತ್ರೆಯನ್ನು ಶುಚಿಗೊಳಿಸುವಂತೆ ಆದೇಶಿಸಿದ್ದು, ಇಂದು ಆರೋಪಿಗಳು, ಸರ್ಕಾರಿ ಆಸ್ಪತ್ರೆಯನ್ನು ಶುಚಿಗೊಳಿಸಿದ್ದಾರೆ.