ಕುಶಾಲನಗರ, ಏ. ೨೪ : ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಘಟನೆಯನ್ನು ಖಂಡಿಸಿ ಹತ್ಯೆಗೊ ಳಗಾದ ಪ್ರವಾಸಿಗರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದಲ್ಲಿ ಸೇರಿ ಘಟನೆ ಖಂಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೊಂಬತ್ತಿ ಬೆಳಗಿದರು.
ದೇಶದ ಐಕ್ಯತೆಗಾಗಿ ಕಾರ್ಯಕರ್ತರು ಹೆದ್ದಾರಿ ರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ಐಕ್ಯತೆಗಾಗಿ ಘೋಷಣೆ ಕೂಗಿದರು.
ಈ ಸಂದರ್ಭ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ದೇಶದಲ್ಲಿ ಧರ್ಮದ ಹೆಸರಿನಲ್ಲಿ ಯಾವುದೇ ರೀತಿಯ ದುಷ್ಕೃತ್ಯಗಳು ನಡೆಯಬಾರದು. ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಸಾಮಾನ್ಯ ಜನರ ಭದ್ರತೆಯನ್ನು ಕಾಪಾಡಲು ಸರ್ಕಾರಗಳು ಆದ್ಯ ಕರ್ತವ್ಯವಾಗಿದೆ. ಇಂತಹ ಘೋರ ದುಷ್ಕೃತ್ಯಗಳನ್ನು ದೇಶದ ಎಲ್ಲರೂ ಒಮ್ಮತದಿಂದ ವಿರೋಧಿಸಬೇಕಾಗಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭಾ ಸದಸ್ಯರಾದ ಖಲೀಮುಲ್ಲಾ, ವಿ.ಎಸ್. ಆನಂದಕುಮಾರ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.