ಮಡಿಕೇರಿ, ಏ. ೨೫: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಗೌಡ ಜನಾಂಗದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಮಡಿಕೇರಿ ಕ್ರಿಕೆಟ್ ಕ್ಲಬ್ (ಎಂಸಿಸಿ) ಹಾಗೂ ದಿ ಎಲೈಟ್ ಕ್ಲಬ್ ಮುನ್ನಡೆ ಸಾಧಿಸಿತು.

ಮಡಿಕೇರಿ ಕ್ರಿಕೆಟ್ ಕ್ಲಬ್ ಜಿ. ಕಿಂಗ್ಸ್ ಸಿದ್ದಲಿಂಗಪುರ ವಿರುದ್ಧ ೨೨ ರನ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಎಂಸಿಸಿ ಸರ್ವ ವಿಕೆಟ್ ಪತನಗೊಂಡು ೧೫೨ ರನ್ ಪೇರಿಸಿತು. ಗುರಿ ಬೆನ್ನತ್ತಿದ ಜಿ. ಕಿಂಗ್ಸ್ ಸಿದ್ದಲಿಂಗಪುರ ೯ ವಿಕೆಟ್ ನಷ್ಟಕ್ಕೆ ೧೩೦ ರನ್‌ಗಳಿಸಲು ಶಕ್ತವಾಗಿ ಸೋಲು ಕಂಡಿತು. ಎಂಸಿಸಿ ಪರ ರಾಹುಲ್ ಶತಕ ಸಿಡಿಸಿ ಮಿಂಚಿದರು.

ಕೂರ್ಗ್ ಹಾಕ್ಸ್ ನೀಡಿದ ಸುಲಭ ಗುರಿಯನ್ನು ಬೆನ್ನತ್ತಿದ ದಿ ಎಲೈಟ್ ಕ್ಲಬ್ ಸ್ಕಾ÷್ವಡ್-೨ ತಂಡ ೪.೩ ಓವರ್‌ಗಳಲ್ಲಿ ಗೆಲುವಿಗೆ ಬೇಕಾದ ಮೊತ್ತ ಸಂಪಾದಿಸಿ ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿತು. ಕೂರ್ಗ್ ಹಾಕ್ಸ್ ೧೨.೪ ಓವರ್ ಅಂತ್ಯಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡು ೪೫ ರನ್ ಪೇರಿಸಿತು. ಎಲೈಟ್ ಕ್ಲಬ್ ೪.೩ ಓವರ್‌ಗಳಲ್ಲಿಯೇ ೪೯ ರನ್ ದಾಖಲಿಸಿ ಗೆಲುವು ಕಂಡಿತು. ಎಲೈಟ್ ಕ್ಲಬ್‌ನ ಬೌಲರ್ ಚೇತನ್ ಚೆದ್ಕುರ್ ೪ ವಿಕೆಟ್ ಪಡೆದುಕೊಂಡರು.