ಕುಶಾಲನಗರ, ಏ. ೨೫: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿನ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆ ದಾಳಿಯನ್ನು ಖಂಡಿಸಿ ಮೌನ ಪ್ರತಿಭಟನೆ ನಡೆಸಿದರು.
ಜಾಮಿಯ ಮಸೀದಿ ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ಸುತ್ತಮುತ್ತ ವಿವಿಧ ಮಸೀದಿಗಳ ಸಹಯೋಗದೊಂದಿಗೆ ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷ ಮಹಮ್ಮದ್ ಅವರು ಮಾತನಾಡಿ, ಭಯೋತ್ಪಾದನಾ ದಾಳಿಯಲ್ಲಿ ನಡೆದ ದುಷ್ಕೃತ್ಯವನ್ನು ಖಂಡಿಸಿದರು.
ಭಾರತ ದೇಶದಲ್ಲಿ ಎಲ್ಲಾ ಧರ್ಮದ ಜನರು ಒಂದೇ ಎಂಬ ಭಾವನೆಯಲ್ಲಿ ನಾವು ಬದುಕುತ್ತಿದ್ದೇವೆ. ದೇಶದ ಕೊನೆಯ ಹಂತದ ನಾಗರಿಕರಿಗೆ ತೊಂದರೆಯಾದಲ್ಲಿ ಮುಸ್ಲಿಂ ಸಂಘಟನೆ ನ್ಯಾಯದ ಪರ ಇರುತ್ತದೆ ಎಂಬುದಾಗಿ ಹೇಳಿದರು. ಕಾಶ್ಮೀರದಲ್ಲಿ ಹತ್ಯೆಗೆ ಒಳಗಾದ ಜನರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು. ನಂತರ ಎಸ್‌ಡಿಪಿಐ ಪಕ್ಷದ ನಗರಾಧ್ಯಕ್ಷರಾದ ಜಕ್ರಿಯ ಮಾತನಾಡಿ ಧರ್ಮ ಭೇದ ಭಾಷೆ ಮರೆತು ಭಯೋತ್ಪಾದಕರ ದಾಳಿಯ ವಿರುದ್ಧ ಹೋರಾಡುವ ಅವಶ್ಯಕತೆ ಇದೆ ಎಂದರು.
ಭಾರತದಲ್ಲಿ ಕಾಶ್ಮೀರದಂತ ಪ್ರವಾಸಿ ತಾಣಕ್ಕೆ ಪ್ರವಾಸಿಗರು ತೆರಳಿದಾಗ ಅವರ ರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕಾಗಿದೆ ಎಂದರು. ಪ್ರತಿಭಟನೆಯಲ್ಲಿ ಜಾಮಿಯಾ ಮಸೀದಿ ಪ್ರಮುಖರಾದ ಮುಬಿನ್, ರಫೀಕ್ ಸ್ಥಳೀಯ ನೂರ್ ಮಸೀದಿಯ ಇರ್ಫಾನ್ ಬಿಲಾಲ್ ಮಸೀದಿಯ ಅಧ್ಯಕ್ಷರಾದ ಮುಜೀಬ್, ಹಿಲಾಲ್ ಮಸೀದಿಯ ಮಜೀದ್, ದಾರುಲ್ ಉಲೂಂ ಮಧುರಸ ಪ್ರಾಂಶುಪಾಲರಾದ ತಂಬ್ಲಿಕ್ ದಾರಿಮೀ, ಮದರಸ ಕಮಿಟಿ ಸದಸ್ಯರು ಸಮುದಾಯದ ಪ್ರಮುಖರು ಇದ್ದರು.