-ಅತಿಕ್ರಮಣ-ತೆರವು-ಶಾಶ್ವತ-ಪರಿಹಾರ-ಅಗತ್ಯ
ಸಿದ್ದಾಪುರ, ಜೂ. 17: ವರ್ಷಂಪ್ರತಿ ಕಾವೇರಿ ಹೊಳೆ ದಂಡೆಯ ಅತಿಕ್ರಮಣಕಾರರಿಗೆ ಮಳೆಗಾಲದಲ್ಲಿ ಗಂಜಿ ಕೇಂದ್ರ ಸಹಿತ ಮೂಲಭೂತ ಸೌಲಭ್ಯ ಕಲ್ಪಿಸಿ ಅತಿವೃಷ್ಟಿ ಹೆಸರಿನಲ್ಲಿ ಹಣ ಪೋಲು ಮಾಡುತ್ತಿದೆ. ಬದಲಾಗಿ ಇಂತಹ ಕಾನೂನು ಬಾಹಿರ ಅತಿಕ್ರಮಣಕ್ಕೆ ಕಡಿವಾಣ ಹಾಕಿ ಶಾಶ್ವತ ಪರಿಹಾರ ರೂಪಿಸುವ ಅಗತ್ಯವಿದೆ. ತಪ್ಪಿದಲ್ಲಿ ಮತ ಬ್ಯಾಂಕ್ ರಾಜಕಾರಣ ಸೇರಿದಂತೆ ಆಡಳಿತ ಯಂತ್ರ ಸರಕಾರಿ ಹಣ ದುರುಪಯೋಗದೊಂದಿಗೆ ಇದೊಂದು ನಿರಂತರ ಬೆಳವಣಿಗೆ ಯಾಗಿ ಮುಂದುವರಿಯು ವಂತಾಗಿದೆ. ಇತ್ತ ದೂರದೃಷ್ಟಿಯ ಯೋಜನೆ ಅವಶ್ಯಕವಾಗಿದೆ.
ಪ್ರವಾಹ ಅಂದರೆ ಏನು.? ಸಾಧಾರಣ ಮಳೆಗಾಲದಲ್ಲಿ ನದಿ ಮೈದುಂಬಿ ಹರಿಯುವದನ್ನು ಪ್ರವಾಹ ಎನ್ನಬಹುದೇ? ಮಳೆಗಾಲದಲ್ಲಿ ನದಿ ಮೈದುಂಬಿ ಹರಿಯದೇ ಬಿರು ಬೇಸಿಗೆಯಲ್ಲಿ ಹರಿಯುವದೇ ಎಂಬದು ಆಡಳಿತ ವ್ಯವಸ್ಥೆಗೆ, ಜನಪ್ರತಿನಿಧಿಗಳಿಗೆ ಅರ್ಥವಾಗಬೇಕಿದ್ದ ಸಾಮಾನ್ಯ ಜ್ಞಾನ. ಇನ್ನು ನದಿ ವಿಶಾಲವಾಗಿ ಹರಿಯಬೇಕಾಗಿರುವ ಪ್ರದೇಶವನ್ನೇ ಒತ್ತುವರಿ ಮಾಡಿಕೊಂಡು ಐಷಾರಾಮಿ ಬದುಕು ಸಾಗಿಸುತ್ತಿರುವ ಬಡವರು ಎಂದು ಬಿಂಬಿಸಿಕೊಂಡವರಿಗೆ ಕಳೆದ ಅನೇಕ ವರ್ಷಗಳಿಂದ ಕೊಡೆ ಹಿಡಿಯಲು ನಿಂತಿರುವ, ಮೊಸಳೆ ಕಣ್ಣೀರು ಸುರಿಸುವ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಯಾವ ಕಾನೂನು ಪಾಲಿಸುತ್ತಿದೆ ಎಂಬದನ್ನು ಪ್ರಜ್ಞಾವಂತ ಸಮಾಜ ಅಧ್ಯಯನ ಮಾಡಬೇಕಿದೆ. ಏಕೆಂದರೆ ಕೊಡಗು ಜಿಲ್ಲೆಯಲ್ಲಿ ಪ್ರತೀ ವರ್ಷ ಒಂದಷ್ಟು ಕೋಟಿ ಪ್ರವಾಹದ ಹೆಸರಿನಲ್ಲಿ ಪೋಲಾಗುತ್ತಿದೆ. ಅರ್ಥಾತ್ ಪೋಲು ಮಾಡಲಾಗುತ್ತಿದೆ. ಅದೂ ನೈಜ ಫಲಾನುಭವಿಗಳಿಗೆ ಅಲ್ಲ. ಅಕ್ರಮ ಭೂ ಮತ್ತು ನದಿ ಪ್ರದೇಶ  ಅತಿಕ್ರಮಿ ಗಳಿಗಾಗಿ.  ಇದಕ್ಕೆ ಯಾರು ಹೊಣೆ?
ಇತ್ತೀಚಿನ ಕೆಲ ವರ್ಷಗಳವರೆಗೂ ಮೃಗಶೀರ ಮಳೆಯ ಆರ್ಭಟ ಅಷ್ಟಾಗಿ ಇರಲಿಲ್ಲ. ಪ್ರಸ್ತುತ ವರ್ಷ ಮೃಗಶಿರ ಮಳೆ ಆರಂಭದಲ್ಲಿಯೇ ರೈತಾಪಿ ವರ್ಗದಲ್ಲಿ ಭರವಸೆ ಮೂಡಿಸಿದೆ. ಕೃಷಿ ಗದ್ದೆಗಳ ಒಡಲು ತುಂಬಿದೆ. ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯ ವಿಹಂಗಮ ನೋಟ ಬೆರಗು ಮೂಡಿಸುತ್ತಿದೆ. ಮುಂದಿನದು ಆರಿದ್ರ ಮಳೆ. ಮಳೆಯ ಆರ್ಭಟ ಹೆಚ್ಚೇ ಇರುತ್ತದೆ. ಈಗಾಗಲೇ ಜಿಲ್ಲಾಡಳಿತ, ಕಂದಾಯ ಇಲಾಖೆ, ಕೃಷಿ ಇಲಾಖೆ, ಜಲಾನಯನ ಇಲಾಖೆ ಕೃಷಿ ಪ್ರಧಾನ ಚಟುವಟಿಕೆಗಳತ್ತ ದೃಷ್ಟಿ ಹರಿಸಬೇಕಿತ್ತು. 
ಆದರೇ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಇತರ ಅಧಿಕಾರಿಗಳು, ತಹಶೀಲ್ದಾರ್, ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳು, ತಾಲೂಕು ಕಾರ್ಯನಿರ್ವ ಹಣಾಧಿಕಾರಿಗಳು ಸೇರಿದಂತೆ  ಕಂದಾಯ ಉಪನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನದಿ ದಡಗಳಲ್ಲಿ, ಗಂಜಿ ಕೇಂದ್ರಗಳಲ್ಲಿ ಬೀಡು ಬಿಟ್ಟಿರುವದು ಜಿಲ್ಲೆಯ ಮಟ್ಟಿಗೆ ವಿಪರ್ಯಾಸವೇ.
ಕೊಡಗು ಜಿಲ್ಲಾಧಿಕಾರಿಯಾಗಿದ್ದ ಸುಭೋದ್ ಯಾದವ್ ನಂತರ ಈಗಿರುವ ಜಿಲ್ಲಾಧಿಕಾರಿ ಶ್ರೀವಿದ್ಯಾ ಒಂದಷ್ಟು ಪ್ರಯೋಗಾತ್ಮಕವಾಗಿ ಚಿಂತಿಸಿ ಕಾರ್ಯನಿರ್ವಹಿಸುತ್ತಾರೆ ಎಂದು ಜನÀ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಅದರೇ ಶ್ರೀವಿದ್ಯಾ ಕೂಡ ಈ ಹಿಂದಿನ ಅಧಿಕಾರಿಗಳು ಅನುಸರಿಸಿದಂತೆ ನದಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿರುವದು, ಗಂಜಿ ಕೇಂದ್ರ ಸ್ಥಾಪನೆ ಮಾಡಿರುವದು ಗಮನಿಸಿದರೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯೇ ಒತ್ತುವರಿದಾರರಿಗೆ ಒತ್ತಾಸೆಯಾಗಿ ನಿಂತಿದೆ ಎಂಬದು ಮೇಲ್ನೊಟಕ್ಕೆ ಕಂಡು ಬರುತ್ತಿರುವ ದೃಶ್ಯ.
ವೀರಾಜಪೇಟೆ ತಾಲೂಕಿನ ಕರಡಿಗೋಡಿನಲ್ಲಿ ಕಾವೇರಿ ನದಿ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿ ರುವ 176 ಮನೆಗಳಿಗೆ ಮತ್ತು ಗುಹ್ಯ ಗ್ರಾಮದಲ್ಲಿ ನದಿ ತೀರವನ್ನು  ಅತಿಕ್ರಮಿಸಿಕೊಂಡಿದ್ದಾರೆ ಎಂದು ಹೇಳಲಾಗಿರುವ 76 ಕುಟುಂಬಗಳಿಗೆ ನದಿ ನೀರಿನಲ್ಲಿ ಏರಿಕೆ ಕಂಡುಬಂದಿರು ವದರಿಂದ  ತಕ್ಷಣವೇ ತಾತ್ಕಾಲಿಕವಾಗಿ ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಜಿಲ್ಲಾಡಳಿತದ ಯಾವದೇ ಮನವಿಗೆ ಸ್ಪಂದಿಸದ ನದಿ ತೀರ ನಿವಾಸಿಗಳು ಕದಲದೆ ಉಳಿದು ಕೊಂಡಿದ್ದಾರೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ಮಳೆಗಾಲದಲ್ಲಿ ನದಿ ಉಕ್ಕಿ ಹರಿಯುವದನ್ನೆ ಪ್ರವಾಹ ಎಂದು ಬಿಂಬಿಸಿ ವರ್ಷಂಪ್ರತಿ  ಅಪಾರ ಮೊತ್ತದ ಹಣ ಪೋಲು ಮಾಡಲಾಗು ತ್ತಿದೆ. ನಿಯಮಾನುಸಾರ ನದಿ ಇಕ್ಕೆಲಗಳ 100 ಮೀಟರ್ ಪ್ರದೇಶದಲ್ಲಿ ಯಾವದೇ ಒತ್ತುವರಿ ಅಥವಾ ಜನವಸತಿ ಇರಕೂಡದು ಎಂಬುದಾಗಿದೆ. ಕೆಲ ತಿಂಗಳ ಹಿಂದೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕಾವೇರಿ ನದಿ ತೀರದ 500 ಮೀಟರ್ ಪ್ರದೇಶದಲ್ಲಿ ಯಾವದೇ ಜನ ವಸತಿ ಇರಕೂಡದು, ವಾಣಿಜ್ಯ ಚಟುವಟಿಕೆಗಳಿಗೆ ಬಳಸಬಾರದು, ಕೃಷಿ ಹೊರತುಪಡಿಸಿ ಯಾವದೇ ಕೈಗಾರಿಕೆಗಳು ನಡೆಯಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎಂದು ಹೇಳಿದ್ದರು. ಈಗ ನದಿ ಪರಿಪೂರ್ಣ ವಾಗಿ ಹರಿಯಲು ಬಿಡದೇ ನದಿ ತೀರ ಒತ್ತುವರಿ ಮಾಡಿಕೊಂಡವರಿಗೆ ಜಿಲ್ಲಾಡಳಿತ ಮತ್ತು ಸರ್ಕಾರವ ಮಣೆ ಹಾಕಿ ಸೌಲಭ್ಯ ಒದಗಿಸುತ್ತಿರುವುದು ಆಡಳಿತ ವ್ಯವಸ್ಥೆಯ ಇಬ್ಬಂದಿ ನೀತಿಯಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ನದಿ ಒತ್ತುವರಿ ಮಾಡಿಕೊಂಡಿರುವ ನೈಜ ಬಡವರನ್ನು, ಫಲಾನುಭವಿ ಗಳನ್ನು ಗುರುತಿಸಿ ದಿಡ್ಡಳ್ಳಿ ಮಾದರಿ ಯಲ್ಲಿ ಸ್ಥಳಾಂತರ ಮತ್ತು ವಸತಿ ಒದಗಿಸುವ ವ್ಯವಸ್ಥೆಗೆ ಮುಂದಾಗ ಬೇಕಿದೆ.
ಇಲ್ಲದಿದ್ದಲ್ಲಿ ಪ್ರವಾಹದ ಹೆಸರಿನಲ್ಲಿ ಕೊಳ್ಳೆ ಹೊಡೆಯುವದು, ಇನ್ನಷ್ಟು ನದಿ ಒತ್ತುವರಿ ಪ್ರಕರಣ, ಓಟ್ ಬ್ಯಾಂಕ್ ರಾಜಕಾರಣ, ನದಿ ಒತ್ತುವರಿದಾರರಿಂದ ಮರಳು ಹನನ, ನದಿ ನೀರನ್ನು ಕಲುಷಿತಗೊಳಿಸುವದು ನಿರಂತರ ಸಾಗುತ್ತಿರುತ್ತದೆ. ಇತ್ತ ಗಂಭೀರ ಚಿಂತನೆ ಅಗತ್ಯ. - ಅಂಚೆಮನೆ ಸುಧಿ

Home    About us    Contact